October 19, 2019 3:27 pm

ವಟಸಾವಿತ್ರೀ ವ್ರತ ಆಚರಿಸುವ ಪದ್ಧತಿ- Rukmini Jayarama Rao

” ಫಲಪೂರ್ಣಿಮಾ , ವಟಸಾವಿತ್ರೀ ವ್ರತ , ಕಾರಹುಣ್ಣಿಮೆ :–

ಜೇಷ್ಠ ಮಾಸದ ಹುಣ್ಣಿಮೆಯಂದು ವಟಸಾವಿತ್ರೀ ವ್ರತ ಆಚರಿಸುವ ಪದ್ಧತಿ ಬಹಳ ಹಿಂದಿನಿಂದಲೂ ಆಚರಣೆಯಲ್ಲಿದೆ — ನಮ್ಮ ಪುರಾಣ ಇತಿಹಾಸಗಳಲ್ಲಿ ಸಾವಿತ್ರೀಕತೆಯನ್ನು ಸೂತಪುರಾಣಿಕರು ಸವಿಸ್ತಾರವಾಗಿ ವಿವರಿಸಿದ್ದಾರೆ — ಸಾವಿತ್ರಿ ತನ್ನ ಪತಿ ಸತ್ಯವಾನನ ಪ್ರಾಣವನ್ನು ಕೊಂಡೊಯ್ದ ಯಮರಾಜನನ್ನೇ ತನ್ನ ಪತಿವ್ರತಾ ಧರ್ಮದ ಶಕ್ತಿಯ ಪ್ರಭಾವದಿಂದ ಯಮಲೋಕದವರೆಗೂ ಬೆಂಬಿಡದೇ ಹಿಂಬಾಲಿಸುತ್ತಾ — ಯಮಧರ್ಮರಾಜನ ಅನೇಕ ಪ್ರಶ್ನೆಗಳಿಗೆ ಸಮಂಜಸ ವಾದ ಉತ್ತರಗಳನ್ನು ಕೊಡುತ್ತಾ ಪ್ರಸನ್ನಗೊಳಿಸಿ — ಕೊನೆಗೂ ತನ್ನ ಪತಿಯ ಪ್ರಾಣವನ್ನು ಮರಳಿ ಪಡೆದು ! ಅಸಾಧಾರಣ ಮಹಾ ಪತಿವ್ರತಾ ಶಿರೋಮಣಿ ಸಾವಿತ್ರಿದೇವಿ ಎಂದೇ ಪ್ರಖ್ಯಾತಳಾದಳು !!

ಯಾರಿಂದಲೂ ಆಗದ ಆ ಕೆಲಸವನ್ನು ಮಾಡಿದ ಅವಳನ್ನು ಕಂಡು ಯಮಧರ್ಮರಾಜನು — ನಿನ್ನ ಈ ಧೈರ್ಯ ಸಾಹಸ , ಬುದ್ಧಿವಂತಿಕೆ , ಹಿರಿಯರಲ್ಲಿ ಗೌರವ , ಪತಿವ್ರತಾಧರ್ಮ ಶಿರೋಮಣಿಯ ಹೆಸರು ಆಚಂದ್ರಾರ್ಕವಾಗಿ ಉಳಿಯಲಿ ! ನಿನ್ನ ಹೆಸರಿನಲ್ಲಿ ಮಾಡುವ ಇಂದಿನ ಪೂಜೆಯಿಂದ ಮಹಿಳೆಯರು ಅವರವರ ಸೌಭಾಗ್ಯ ಕಾಪಾಡಿಕೊಳ್ಳುವಂತಾಗಲಿ , ಎಂದು ಆಶೀರ್ವಾದ ಮಾಡಿದನಂತೆ !!
ಅಂದಿನಿಂದಲೂ ಜೇಷ್ಠ ಮಾಸದ ಈ ಹುಣ್ಣಿಮೆಯಂದು ವಟಸಾವಿತ್ರೀ ವ್ರತವಾಗಿ ಆಚರಿಸುತ್ತಾ ಬಂದಿದ್ದಾರೆ , ವಟವೃಕ್ಷದ ಕೆಳಗೇ ಸತ್ಯವಾನನ ಆಯಸ್ಸನ್ನು ಮರಳಿಪಡೆದಿದ್ದಳಂತೆ ಸಾವಿತ್ರಿದೇವಿ — ಆದ್ದರಿಂದ ಅಂದಿನಿಂದ ಅರಳೀಮರಕ್ಕೂ ಕೂಡಾ ದೀರ್ಘಾಯಸ್ಸು ದೊರಕಿದೆತಂತೆ !!!

ವಟಸಾವಿತ್ರೀದೇವಿಯ ವ್ರತಾಚರಣೆ

ಉತ್ತರ ಕರ್ನಾಟಕದ ಕಡೆ ಈ ವ್ರತಾಚರಣೆ ಜಾಸ್ತಿಯಿದೆ , ಅವರು ವಟವೃಕ್ಷದ ಕೆಳಗೇ ವ್ರತ ಆಚರಿಸಿ ವೃಕ್ಷಕ್ಕೆ ಪೂಜಿಸಿ ಅರಿಶಿನ ನೂಲು ಸುತ್ತುತ್ತಾ ಪ್ರದಕ್ಷಿಣೆ ಹಾಕಿ, ತಮ್ಮ ಸೌಭಾಗ್ಯವೃದ್ಧಿಯಾಗಲೆಂದೂ ಪತಿಗೆ ಆಯುರಾರೋಗ್ಯಸದಾ ಇರಲೆಂದು ಬೇಡುತ್ತಾರೆ — ಅರಿಶಿನಕುಂಕುಮದಿಂದ , ಹೂವು ಫಲಮಂತ್ರಾಕ್ಷತೆಯಿಂದ ಪೂಜಿಸಿ ಆರತಿ ಎತ್ತಿ ಫಲನೈವೇದ್ಯ ಮಾಡಿ ಮುತೈದೆಯರಿಗೆ ಎಲೆಅಡಿಕೆ ದಕ್ಷಿಣೆ ಸಮೇತ ಫಲವನ್ನು ವಿಶೇಷವಾಗಿ ಈಮಾಸದಲ್ಲಿ ದೊರಕುವ ಹಣ್ಣುಗಳ ರಾಜ ಮಾವಿನಹಣ್ಣನ್ನು ದಾನ ಕೊಡುವ ಪದ್ಧತಿ ರೂಢಿಯಲ್ಲಿದೆ !

ಕಾರಹುಣ್ಣಿಮೆ –  ಅರಳಿ ಮರಕ್ಕೆ ಪ್ರದಕ್ಷಿಣೆ ನಮಸ್ಕಾರ

ಅರಳಿ ಮರಕ್ಕೆ ಮೂರು ಪ್ರದಕ್ಷಿಣೆ ನಮಸ್ಕಾರ ಹಾಕಿ ನಮ್ಮ ಸೌಭಗ್ಯಸ್ಥಿರವಾಗಿರಲೆಂದು ಬೇಡುತ್ತಾ – ನಮಸ್ಕರಿಸಿ ಮುತ್ತೈದೆಯರಿಗೆ ಫಲತಾಂಬೂಲವನ್ನು ದಕ್ಷಿಣೆ ಸಮೇತ ದಾನಮಾಡಿ ನಮಸ್ಕರಿಸಿ ಉತ್ತಮ ಫಲವನ್ನು ನಾವೆಲ್ಲರೂ ಪಡೆಯೋಣ ಅಲ್ಲವೇ ?
ಉತ್ತರ ಕರ್ನಾಟಿಕದ ಕಡೆ ಕಾರಹುಣ್ಣಿಮೆ ಎಂಬ ಆಚರಣೆಯ ಪದ್ಧತಿ ಇಂದು ಇದೆ — ವ್ಯವಸಾಯಗಾರರು ತಮ್ಮತಮ್ಮ ಮನೆಯ ಎತ್ತುಗಳಿಗೆ ರಾಸುಗಳಿಗೆ ಮೈತೊಳೆದು ಬಣ್ಣಹಚ್ಚಿ ಸಿಂಗರಿಸಿ ,ಅದಕ್ಕೆ ಮನೆಯಲ್ಲಿ ಹೆಂಗಳೆಯರು ತಯಾರುಮಾಡಿದ ಕರಿದ ಕರ್ಜಿಕಾಯಿ ಚಕ್ಕುಲಿ ಹಾರಹಾಕಿ – ಸಂಜೆ ಊರಿನ ದೇವಸ್ಥಾನದ ಕೇರಿಯ ಮಧ್ಯಭಾಗದಲ್ಲಿ ಓಡಿಸುತ್ತಾರೆ !! ಅದರ ಬೆನ್ನೇರಿ ಓಡುತ್ತಾ ಹಿಡಿದು ಕೊರಳಿನಿಂದ ಕರಿದ ಪದಾರ್ಥಗಳನ್ನು ಹರಿಯುವ ಧೀರರೂ ಇರುತ್ತಾರೆ !!!
ಹಳ್ಳಿಯ ಹಬ್ಬಗಳ ಸಂಭ್ರಮಾಚರಣೆಯ ಸಂತಸ ಸಂಭ್ರಮ ಸಡಗರ ಅಲ್ಲಿಂದ ಬಂದವರಿಗೇ ಗೊತ್ತು !!!

Be the first to comment

Leave a Reply

Your email address will not be published.


*